ಪಂಡಿತತ್ರಯ -
ವೀರಶೈವ ಕವಿಗಳು ಸಾಮಾನ್ಯವಾಗಿ ತಮ್ಮ ಗ್ರಂಥಗಳ ಆದಿಯಲ್ಲಿ ಮಂಚಣಪಂಡಿತ. ಮಲ್ಲಿಕಾರ್ಜುನ ಪಂಡಿತ, ಶ್ರೀಪತಿಪಂಡಿತ ಎಂಬ ಮೂವರವನ್ನು ಪಂಡಿತತ್ರಯರೆಂದು ಸ್ತುತಿಸಿದ್ದಾರೆ. ಅವರ ಜೀವನದ ವಿವರಗಳು ಈ ರೀತಿ ಇವೆ.
1. ಮಂಚಣಪಂಡಿತ : ಈತನ ಪೂರ್ಣ ಹೆಸರು ಶಿವಲೆಂಕಮಂಚಣ್ಣ ಪಂಡಿತಾರಾಧ್ಯ ಎಂದು. ಈತನ ಸ್ಥಳ ಕಾಶೀ ಕ್ಷೇತ್ರ. ತಾತ ಸೋಮಶಂಭುದೇಶಿಕ, ತಂದೆ ಸಕಲಾಗಮಾಚಾರ್ಯ ಶಂಭುಭಟ್ಟ. ಈತ ವಚನಗಳನ್ನು ರಚಿಸಿದ್ದಾನೆ. ವಚನಗಳ ಅಂಕಿತ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ. ಪಾಲ್ಕುರಿಕೆ ಸೋಮನಾಥನ ಗಣಸಹಸ್ರನಾಮದಲ್ಲಿ ಈತನ ಹೆಸರಿದೆ.
ಈತ ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳ ಮೇಲೆ ವ್ಯಾಖ್ಯೆಗಳನ್ನು ಬರೆದಿದ್ದಂತೆ ತಿಳಿದುಬರುತ್ತದೆ. ನಂದಿಕೇಶ್ವರನ (1700) ಲಿಂಗಧಾರಣಚಂದ್ರಿಕೆಯಲ್ಲಿ ವೇದಮಂತ್ರಗಳಿಗೆ ಲಿಂಗಧಾರಣ ಪರವಾಗಿ ವ್ಯಾಖ್ಯಾನ ಮಾಡಿರುವ ಪೂರ್ವಾಚಾರ್ಯರಲ್ಲಿ ಈತನೂ ಒಬ್ಬನೆಂದು ಹೇಳಲಾಗಿದೆ. ಶ್ರೀಕರಭಾಷ್ಯ ಕರ್ತೃ ಶ್ರೀಪತಿ ಪಂಡಿತ (1060) ತನ್ನ ಭಾಷ್ಯದಲ್ಲಿ ಉಲ್ಲೇಖಿಸಿರುವ ಪ್ರಕಾರ ಈತ ವೇದ ಉಪನಿಷತ್ತು ಮತ್ತು ಬ್ರಹ್ಮಸೂತ್ರಾದಿಗಳಿಗೂ ಭಾಷ್ಯಗಳನ್ನು ಬರೆದಿರುವಂತೆ ತೋರುತ್ತದೆ. ಕಾಶೀಕಾಂಡ ಚನ್ನವೀರಕವಿ (ಸು. 1500) ತಾನು ಮಂಚಣಪಂಡಿತ ವಂಶೀಯನೆಂದು ಹೇಳಿಕೊಂಡಿರುವುದಲ್ಲದೆ, ಮಂಚಣನು ಯಜುಶ್ಯಾಖಾಧ್ಯಾಯಿ, ವಾಮದೇವ ಮುಖೋದ್ಭೂತ, ಗಜಕರ್ಣಪುತ್ರ, ಅತ್ರಿಗೋತ್ರಜ, ಶಿವಲೆಂಕಮಂಚಣ ಪಂಡಿತ ಎಂದು ಸೂಚಿಸಿದ್ದಾನೆ. ಈ ಎಲ್ಲ ಕಾರಣಗಳಿಂದ ಮಂಚಣ್ಣ ಪಂಡಿತಾರಾಧ್ಯ ಕ್ರಿ.ಶ. ಹನ್ನೊಂದನೆಯ ಶತಮಾನ ಆಥವಾ ತತ್ಪೂರ್ವಜನೆಂದೂ ತಿಳಿದುಬರುತ್ತದೆ.

2. ಮಲ್ಲಿಕಾರ್ಜುನ ಪಂಡಿತಾರಾಧ್ಯ : ಈತ ಬಸವೇಶ್ವರನ (1160) ಸಮಕಾಲೀನನೆಂದು ತಿಳಿದುಬರುತ್ತದೆ. ಪಾಲ್ಕುರಿಕೆ ಸೋಮನಾಥನ (1195) ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆ ಗುರುರಾಜನ (ಸು. 1430) ಸಂಸ್ಕøತ ಪಂಡಿತ ಚಾರಿತ್ರ, ನೀಲಕಂಠಾಚಾರ್ಯನ (ಸು. 1495) ಆರಾಧ್ಯ ಚಾರಿತ್ರ, ಸಿದ್ಧನಂಜೇಶನ (ಸು. 1650) ಗುರುರಾಜ ಚಾರಿತ್ರಗಳಲ್ಲಿ ಈತನ ಚರಿತ್ರೆ ಉಕ್ತವಾಗಿದೆ.

ಈತ ಶ್ರೀಶೈಲ ಮಲ್ಲಿಕಾರ್ಜುನನ ವರಪ್ರಸಾದದಿಂದ ಗೌರಾಂಬೆ ಮತ್ತು ಭೀಮನ ಪಂಡಿತರಿಗೆ ಮಗನಾಗಿ ಜನಿಸಿದವ. ಗುರು ಕೋಟಿ ಪಲ್ಲಾರಾಧ್ಯ. ಶಿಷ್ಯ ದೋನ ಮಾರ್ಯ.

ಈತ ಚೋಳನ ಆಸ್ಥಾನದಲ್ಲಿ ಜೈನ-ಬೌದ್ಧ ಚಾರ್ವಾಕಾದಿ ಮತಗಳನ್ನು ಖಂಡಿಸಿ ವೀರ ಶೈವಾಚಾರವನ್ನು ಸ್ಥಾಪಿಸಲು ಯತ್ನಿಸಿದ. ಚೋಳ ಈತನ ಕಣ್ಣನ್ನು ಕೀಳಿಸಲು ಈತ ಅವನನ್ನು ಶಪಿಸಿ, ಆ ದೇಶವನ್ನು ಬಿಟ್ಟು ಅಮರಾರಾಮಕ್ಕೆ ಬಂದು ಅಲ್ಲಿ ಗಣಸಹಸ್ರವನ್ನು ಜಪಿಸಿ ಶಿವಕೃಪೆಯಿಂದ ಊಧ್ರ್ವ ನೇತ್ರವನ್ನು ಪಡೆದ. ಬಸವ ಕಳಿಸಿದ ಭಸ್ಮವನ್ನು ಧರಿಸಿದೊಡನೆಯೇ ಈತನಿಗೆ ಕನ್ನಡಭಾಷೆ ಬಂದಿತೆಂದೂ ಆಗ ಕೆಲವು ವಚನಗಳನ್ನು ಈತ ಬರೆದಂತೆ ತಿಳಿದು ಬಂದಿದೆ. ಈತನ ವಚನಗಳ ಅಂಕಿತ ಗುರು ಸಿದ್ಧಾಮಲ್ಲು ಎಂದು ಊಹಿಸಲಾಗಿದೆ. ಗಣಸಹಸ್ರನಾಮ, ಇಷ್ಟಲಿಂಗ ಸ್ತೋತ್ರ, ಬಸವಗೀತ ಮತ್ತು ಶಿವತತ್ತ್ವಸಾರ (ತೆಲುಗು) ಮುಂತಾದ ಗ್ರಂಥಗಳು ಈತನವೆಂದು ಹೇಳಲಾಗಿದೆ.

ಈತ ಕಲ್ಯಾಣಕ್ಕೆ ಬಸವನನ್ನು ನೋಡ ಹೊರಟು ಹಾನುಗಲ್ಲಿಗೆ ಬಂದಾಗ ದಾರಿಯಲ್ಲಿ ಬಸವಂ ಕೂಡಲ ಸಂಗಮೇಶ್ವರದಲ್ಲಿ ಅಡಗಿದ ಎಂದು ಕೇಳಿ ಆತನು ನಿರಾಶನಾಗಿ ಹಿಂದಿರುಗಿ ವನಿಪುರಕ್ಕೆ ಬಂದು ಅಲ್ಲಿಂದ ವೆಲ್ಲಿಟೂರಿಗೆ ಆಗಮಿಸಿ, ಶ್ರೀಶೈಲವನ್ನು ಪ್ರದಕ್ಷಿಣೆ ಮಾಡಿ ಬರಲು ತನ್ನ ಶಿಷ್ಯ ದೋನಮಯ್ಯನನ್ನು ಕಳುಹಿಸಿದ. ದೋನಮಯ್ಯ ಹಿಂದಿರುಗಿ ಬಂದು ಶ್ರೀಶೈಲಮಹಿಮೆಯನ್ನು ಹೇಳುತ್ತಿರುವಾಗ ಈಗ ಲಿಂಗೈಕ್ಯನಾದಂತೆ (1197) ತಿಳಿದುಬಂದಿದೆ.

3. ಶ್ರೀಪತಿಪಂಡಿತ ಅಥವಾ ಶ್ರೀಪತಿ ಪಂಡಿತಾರಾಧ್ಯ : ಮೊದಲಿಗೆ ಕಾಶೀಕ್ಷೇತ್ರವಾಸಿಯಾಗಿದ್ದು, ಅಲ್ಲಿ ಶ್ರೀಶೈಲಪೀಠದ ಅಧ್ಯಕ್ಷ ಜಗದ್ಗುರು ವಿರೂಪಾಕ್ಷ ದೇಶಿಕೇಂದ್ರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಅಲ್ಲಿಂದ ಬೆಜವಾಡಕ್ಕೆ ಆಗಮಿಸಿ, ಅಲ್ಲಿ ಗಾಣಿಗವಂಶೀಯರ ಗುರುವಾಗಿದ್ದಂತೆ ಪುಲ್ಲಕವಿಯ (1800) ಶ್ರೀಶೈಲ ಪಂಡಿತಾರಾಧ್ಯ ಚರಿತ್ರೆಯಲ್ಲಿ ಉಕ್ತವಾಗಿದೆ. ಬೆಜವಾಡ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿರುವ ಶಾಸನದಲ್ಲಿ ಈತ ಶಿವಪ್ರಸಾದ ಮಹಿಮೆಯನ್ನು ಪ್ರಶಂಸಿಸಿ, ಅದರ ಮಹತ್ತ್ವವನ್ನು ತೋರಿಸಲು ಅಗ್ನಿಯನ್ನು ರೇಷ್ಮೆ ವಸ್ತ್ರದಲ್ಲಿ ಕಟ್ಟಿ ಬನ್ನಿಮರಕ್ಕೆ ಬಿಗಿದಿದ್ದನೆಂದು ಹೇಳಿದೆ. ಇದನ್ನು ಸಂಸ್ಕøತ ಬಸವಪುರಾಣ, ಪಾಲ್ಕುರಿಕೆ ಸೋಮನಾಥನ ಆಂಧ್ರ ಬಸವಪುರಾಣ ; ಮಲ್ಲಿಕಾರ್ಜುನ ಪಂಡಿತಾರಾಧ್ಯಚರಿತ್ರೆ, ಮಲ್ಲಿಕಾರ್ಜುನ ಪಂಡಿತನ ಶಿವತತ್ತ್ವಸಾರ ಮುಂತಾದವುಗಳಲ್ಲಿ ಕಾಣಬಹುದು.

ಈತ ರಚಿಸಿರುವ ಶ್ರೀಕರಭಾಷ್ಯದಲ್ಲಿ ಕ್ರಿ.ಶ. ಸು. 1017ರ ಶ್ರೀರಾಮಾನುಜ ಶ್ರೀ ಭಾಷ್ಯದ (1017) ಅನೇಕ ಅವತರಣಗಳು ಉದ್ಧøತವಾಗಿರುವುದರಿಂದಲೂ ಬಸವ (1160) ಸಮಕಾಲಿಕನಾದ ಮಲ್ಲಿಕಾರ್ಜುನಪಂಡಿತ ಮತ್ತು ಪಾಲ್ಕುರಿಕೆ ಸೋಮನಾಥರು (1195) ಈತನನ್ನು ಹೆಸರಿಸಿರುವುದರಿಂದಲೂ ಈತ ಕ್ರಿ.ಶ. ಸು. 1060 ರಲಿದ್ದಿರಬೇಕಂದು ಊಹಿಸಲಾಗಿದೆ. ಶ್ರೀಕರಭಾಷ್ಯ ವೀರಶೈವ ಸಿದ್ಧಾಂತ ಪ್ರತಿಪಾದಕವಾದ ಪ್ರಮಾಣಗ್ರಂಥವಾಗಿ ಸ್ವೀಕೃತವಾಗಿದೆ. ಈತ ಮೊದಲಿಗೆ ಕೌಶಿಕ ಗೋತ್ರಕ್ಕೆ ಸೇರಿದ್ದನೆಂದು ವೀರಣಾಮಾತ್ಯನ ಭಲ್ಲಣ ಚರಿತ್ರೆಯಲ್ಲಿ ಉಕ್ತವಾಗಿದೆ.						(ಎಂ.ಜಿ.ಎಂ.; ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ